ಹಸಿವು – ಮನಸ್ಸಿಗೆ ಬಂದದ್ದು

ಹಸಿವು – ಮನಸ್ಸಿಗೆ ಬಂದದ್ದು

  • ಬಿ. ಆರ್. ರವೀಂದ್ರನಾಥ
  • 23-07-2022

ವಿಶ್ವ ಸಂಸ್ಥೆ ಹೇಳಿರುವ ಪ್ರಕಾರ ವಿಶ್ವಾದ್ಯಂತ ಪ್ರತಿ ದಿನ 825 ಮಿಲಿಯ ಜನರು ಹಸಿದ ಹೊಟ್ಟೆಯಲ್ಲಿ ಮಲಗುತ್ತಾರಂತೆ. ಕೋವಿಡ್ 19ನ ಪರಿಣಾಮದಿಂದ ಹೆಚ್ಚುವರಿಯಾಗಿ 135 ಮಿಲಿಯ ಜನರು ಉಪವಾಸ ಬೀಳುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ವಿಶ್ವ ಸಂಸ್ಥೆಯು ನೀಡಿತ್ತು.

ಪ್ರಪಂಚದ ಎಲ್ಲಾ ತಾಯಂದಿರಿಗೆ ಜನನವಾಗುವ ಮಗು ಅಳುತ್ತದೆ, ಭೂಮಿಗೆ ಬಂದ ಕಂದನ ಮೊದಲ ಅಳುವಿನಿಂದಲೇ ಶುರುವಾಗುವುದು ಹಸಿವು. ಪ್ರಪಂಚದಲ್ಲಿ ೮೮ ಸಾವಿರಕೋಟಿ ಜೀವರಾಶಿಗಳು ಇವೆ. ಎಲ್ಲಾ ಜೀವರಾಶಿಗಳಿಗೂ ಹಸಿವು ಸಾಮಾನ್ಯ, ಬುದ್ದಿಜೀವಿ ಎನಿಸಿಕೊಂಡಿರುವ ಮಾನವ ಮೊದಲನೆಯವನಾಗಿರುತ್ತಾನೆ. ಮಾನವ ಹಸಿವಾಗುವುದನ್ನು ಹೇಳಿಕೊಳ್ಳುತ್ತಾನೆ. ಪ್ರಾಣಿಗಳು ಆಹಾರಕ್ಕಾಗಿ ಒಂದು ಪ್ರಾಣಿಯನ್ನು ಇನ್ನೊಂದು ಪ್ರಾಣಿ ಹಿಡಿದು ಭಕ್ಷಿಸುತ್ತದೆ. ಇದನ್ನು ಜೀವನ ಚಕ್ರ ಎಂತಲೂ ಕರೆಯಬಹುದು ಮೊದಲು ಮನುಷ್ಯನು ಪ್ರಾಣಿಗಳನ್ನು ಬೇಟೆಯಾಡಿ ಹಸಿ ಮಾಂಸವನ್ನು ಭಕ್ಷಿಸುತ್ತಿದ್ದನು. ಮಾನವ ಆಧುನಿಕವಾಗಿ ಬದಲಾಗುತ್ತಾ ಹೋಸ ಆಲೋಚನೆಗಳಿಂದ ಹೊಸ ಬದುಕನ್ನು ಕಂಡುಕೊಂಡನು ಹಾಗೂ ತನ್ನ ಆಹಾರ ಪದ್ದತಿಗಳನ್ನು ಬಹಳಷ್ಟು ಬದಲಿಸಿಕೊಂಡಿರುತ್ತಾನೆ.

ಹೀಗೆ ಬದಲಿಸಿಕೊಂಡ ಪದ್ದತಿಗಳ ಜೊತೆಗೆ, ಮಾನವನಲ್ಲಿ ಬೇಕು ಬೇಡಗಳ ಸರಮಾಲೆಯೇ ಬೆಳೆದು ನಿಂತಿದೆ. ಇಂದಿನ ಮಾನವನ ಇಷ್ಟ ಅಇಷ್ಟಗಳ ಆಧಾರದ ಮೇಲೆಯೇ ಬಹಳಷ್ಟು ಉದ್ಯಮಗಳು ಬೆಳೆದು ನಿಂತಿವೆ. ಇಂತಹದ್ದೇ ಆಹಾರ ಬೇಕು, ಇಂತಹದ್ದು ಬೇಡವೇ ಬೇಡ ಎಂದು ಹೇಳಿ ಅದನ್ನು ಪಾಲಿಸಿಕೊಳ್ಳುವ ಸಾಮರ್ಥ್ಯ ಇಂದಿನ ಮಾನವನಿಗೆ ಇದೆ. ಈ ಸಾಮರ್ಥ್ಯ ಬಂದಿರುವುದು ಅವನ ಹಣದ ಬಲದಿಂದ ಎಂದು ಬೇರೆಯಾಗಿ ಹೇಳಬೇಕಾಗಿಲ್ಲ. ಬೆಳಗಿನ ಉಪಾಹಾರ ಬೇರೆ, ಮಧ್ಯಾನದ ಊಟ ಬೇರೆ, ಸಂಜೆಯ ತಿಂಡಿ ಬೇರೆ ಹಾಗೂ ರಾತ್ರಿಯ ಊಟ ಬೇರೆ ಎಂದು  ಹಠ ಹಿಡಿಯುವ ಸಾಕಷ್ಟು ಜನರನ್ನು ನಾವು ಸುಲಭವಾಗಿ ಕಾಣಬಹುದು. ನನಗೆ ಬೆಂಡೇಕಾಯಿ ಇಷ್ಟ ಇಲ್ಲ, ಕಡಿಮೆ ದರ್ಜೆಯ ಅಕ್ಕಿ ಗಂಟಲಿನಲ್ಲಿ ಇಳಿಯುವುದಿಲ್ಲ. ಪಂಚತಾರ ಹೋಟೆಲ್ ಗಳ ಊಟವೇ ನನಗೆ ಬೇಕು ಇತ್ಯಾದಿ ಇತ್ಯಾದಿ ಉದಾಹರಣೆಗಳು ಹೇರಳವಾಗಿ ದೊರಕುತ್ತವೆ.

ಕೋವಿಡ್ 19 ವೈರಾಣು ದೆಸೆಯಿಂದ ವಿಶ್ವಾದ್ಯಂತ ಲಾಕ್ ಡೌನ್ ಪಾಲಿಸಲಾಯಿತು. ವಿಶಿಷ್ಟ ಊಟ ತಿಂಡಿಗಳನ್ನು ಪೂರೈಕೆ ಮಾಡುವ ವ್ಯಕ್ತಿ, ಸಂಸ್ಥೆಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಹೊರ ಪೂರೈಕೆ ಅಲಭ್ಯವಾಗಿತ್ತು. ಎಲ್ಲವನ್ನೂ ಖರೀದಿಸಬಹುದು ಎಂದು ಬೀಗುವ ಹಣಕ್ಕೆ ಬೆಲೆಯಿಲ್ಲದಾಗಿತ್ತು. ಹಸಿವನ್ನು ನೀಗಿಸಲು ಹಣ ಅಸಮರ್ಥವಾಗಿತ್ತು.

ಅಂತಹ ಸಂದರ್ಭಗಳಲ್ಲಿ ಸ್ವತಹ ಸಿದ್ದಪಡಿಸುವ ಸಾಮರ್ಥ್ಯವಿಲ್ಲದಿದ್ದವರ ಅಥವಾ ವ್ಯವಸ್ಥೆ ಇಲ್ಲದವರ ಗತಿ ಏನಾಗಿದ್ದಿರಬಹುದು? ಅದರಲ್ಲೂ ಮೇಲೆ ಹೇಳಿದ ರೀತಿಯ ಹಠಮಾರಿತನಗಳನ್ನು ರೂಢಿಸಿಕೊಂಡಿರುವವರು ಏನು ಮಾಡಿರಬಹುದು ? ಇಂತಹವರು ಹಸಿವನ್ನು ಹೇಗೆ ಸಹಿಸಿಕೊಂಡಿರಬಹುದು?

ಮಾನವನ ಹಸಿವಿನ ಗುಣ ಎಂತಹದ್ದು ಎಂಬ ಸಂದೇಹ ಕೆಲವು ಬಾರಿ ಉಂಟಾಗುತ್ತದೆ. ವಿಶ್ವಾದ್ಯಂತ ಇರುವ 88 ಕೋಟಿ ವಿವಿಧ ರೀತಿಯ ಜೀವಿಗಳು ಅನುಭವಿಸುವ ಹಸಿವುಗಳ ಪೈಕಿ ಮಾನವ ಎಂಬ ಕೇವಲ ಒಂದು ಜೀವಿಯ ಹಸಿವಿಗೆ ವಿಶೇಷ ಸ್ಥಾನವಿದೆಯೇ. ಮಾನವನಿಗೆ ಜಿಹ್ವಾ ಚಾಪಲ್ಯ ಇರುವುದು ನಿಜ. ಜಿಹ್ವೆಗೂ ಹಸಿವಿಗೂ ಇರುವ ನಂಟು ಯಾವ ರೀತಿಯದು. ರುಚಿಯನ್ನು ನಿರ್ಧರಿಸುವ ಜಿಹ್ವೆಗೆ ಹಸಿವನ್ನುನಿಯಂತ್ರಿಸುವ ಸಾಮರ್ಥ್ಯವಿದೆಯೇ? ಅಥವಾ ಹಸಿವು ಜಿಹ್ವೆಯ ಬೇಕು ಬೇಡಗಳನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆಯೇ. ಹಾಗಿದ್ದಲ್ಲಿ ಜಿಹ್ವೆ ಆಧಾರಿತ ಉದ್ಯಮಗಳು ಹೇಗೆ ಯಶಸ್ವಿಯಾಗಿವೆ?.

ಇಂತಹ ಜಿಜ್ಞಾಸೆಗಳು ಹಸಿವನ್ನು ನಿಜವಾಗಿ ಅನುಭವಿಸಿಲ್ಲದವರನ್ನು ಕಾಡುತ್ತವೆ ಎಂದರೆ ತಪ್ಪಾಗಲಾರದು. ದೇಹದ ಅನೇಕ ಅಗತ್ಯಗಳ ಪೈಕಿ ಹಸಿವು ಒಂದಾದರೂ ಹಸಿವಿಗೆ ವಿಶಿಷ್ಟ ಸ್ಥಾನವಿರುವುದನ್ನು ಗುರುತಿಸಲೇ ಬೇಕು.  ಹಸಿವು ಎಂಬುದು ಇಲ್ಲದಿದ್ದಲ್ಲಿ, ಈ ಪ್ರಪಂಚವೇ ಅಸ್ಥಿತ್ವದಲ್ಲಿರುತ್ತಿರಲಿಲ್ಲ. ಹಸಿವು ಈ ಪ್ರಪಂಚದ ಉಳಿವಿನ ಬೆನ್ನೆಲಬು. ಹಸಿವಿಲ್ಲದೇ ಪ್ರಪಂಚವಿಲ್ಲ. ಹಸಿವು ಜೀವಿಯ ಉಳಿವಿಗೆ ಅತ್ಯಗತ್ಯ. ಯಾವುದೇ ಜೀವಿಯ ಚಟುವಟಿಕೆಗಳಿಗೆ ಅದು ತಿನ್ನುವ ಆಹಾರವೇ ಆಧಾರ. ತನಗೆ ದೊರಕಿದ ಆಹಾರವನ್ನು ತನ್ನ ದೇಹಕ್ಕೆ ಬೇಕಾಗುವಂತೆ ಪರಿವರ್ತಿಸುವ ಅಧ್ಭುತ ವ್ಯವಸ್ಥೆಯೇ ಜೀವದ ಮೂಲ, ಪ್ರಪಂಚದ ಮೂಲ.

ನಮ್ಮ ದೈನಂದಿನ ಚಟುವಟಿಕೆಗಳನ್ನು ಮಾಡಲೆಂದೇ ಹಸಿವನ್ನು ತಣಿಸಬೇಕು. ಆದರೆ, ನಮಗೆ ಹಸಿವು ಉಚಿತವಾಗಿ ಲಭ್ಯವಾಗುವುದಿಲ್ಲ. ಹಸಿವನ್ನು ಗಳಿಸಿಕೊಳ್ಳಬೇಕಾಗುತ್ತದೆ. ಹಸಿವನ್ನು ನಾವು ಗಳಿಸಿಕೊಂಡರೆ ಬಹುತೇಕ ನಮಗೆ ನಿದ್ರೆಯೂ ಉಚಿತವಾಗಿ ಲಭ್ಯವಾಗುತ್ತದೆ. Buy one take one free. ಹಸಿವಾಗಬೇಕು ಎಂಬ ಗುರಿಯಿಂದ ನಾವು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಒಂದು ಅನಿವಾರ್ಯತೆ. ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಾವು ತಿಂದಿರುವ ಆಹಾರ ಜೀರ್ಣಗೊಂಡು ಮತ್ತೊಮ್ಮೆ ಹಸಿವಾಗಬೇಕು ಎಂಬ ದೃಷ್ಟಿಯಿಂದ ದೈಹಿಕ ಶ್ರಮವಿರುವ ಚಟುವಟಿಕೆಗಳನ್ನು ಮಾಡುತ್ತಿರುತ್ತೇವೆ. ಉದಾ; ನಡಿಗೆ, ಓಟ, ವ್ಯಾಯಾಮ ಇತ್ಯಾದಿ. ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದೇ ಹಸಿವಿಗೆ ನಾವು ನೀಡುವ ಗೌರವ.

ಹಸಿವನ್ನು ಸಕಾಲದಲ್ಲಿ ತಣಿಸುವುದು ಅತ್ಯಗತ್ಯ. ಹಸಿವನ್ನು ಸಕಾಲದಲ್ಲಿ ತಣಿಸದಿದ್ದರೆ, ಹಲವಾರು ರೀತಿಯ ಪೂರ್ವಸ್ಥಿತಿಗೆ ಮರಳಲಾಗದಂತಹ ಬದಲಾವಣೆಗಳು ದೇಹದ ವ್ಯವಸ್ಥೆಯಲ್ಲಿ ಉಂಟಾಗುತ್ತದೆ. ಹಸಿವನ್ನು ಸಕಾಲದಲ್ಲಿ ತಣಿಸದಿದ್ದಲ್ಲಿ ಉಂಟಾಗುವ ದೈಹಿಕ ಪರಿಣಾಮಗಳು ದೀರ್ಘಕಾಲದಲ್ಲಿ ತಲೆ ಎತ್ತುತ್ತವೆ. ಆದ್ದರಿಂದ, ತಿಂಗಳಿಗೆ ಎರಡು ಬಾರಿ ಏಕಾದಶಿಯನ್ನು ಯೋಜಿತ ರೀತಿಯಲ್ಲಿ ಮಾಡುವುದು ಉಚಿತವೇ ಹೊರತು ಹಸಿವನ್ನು ಕಡೆಗಣಿಸಬಾರದು.

ಹಸಿವನ್ನು ಕಡೆಗಣಿಸಿದಲ್ಲಿ, ಕೆಲವು ಬಾರಿ ದೇಹವು ಮನಸ್ಸು ಅಥವಾ ಮೆದುಳಿನ ವಿರುದ್ದ ಒಂದು ರೀತಿಯ ಪ್ರತೀಕಾರ ತೆಗೆದುಕೊಳ್ಳುತ್ತದೆ. ಮಕ್ಕಳು ಹಸಿದಿರುವಾಗ ಬಹಳ ಅನಿರೀಕ್ಷಿತ ರೀತಿಗಳಲ್ಲಿ ವರ್ತಿಸುತ್ತಾರೆ. ಅಂತಹ ಸಮಯಗಳಲ್ಲಿ ಅವರ ನಿಯಂತ್ರಣ ಸುಲಭವಾಗಿರುವುದಿಲ್ಲ. ಬಹಳಷ್ಟು ಬಾರಿ ಮಕ್ಕಳ ಅನಿರೀಕ್ಷಿತ ಚಲನೆಗಳಿಂದ ಆಕಸ್ಮಿಕಗಳು ಉಂಟಾಗಬಹುದು. ಕೆಲವು ಬಾರಿ ಹಸಿದಿರುವಾಗ, ಮಕ್ಕಳು ರಸ್ತೆಯಲ್ಲಿ ಹಠಾತ್ತಾಗಿ ಓಡಿಬಿಡುವುದು, ಮೇಲಿನಿಂದ ಕೆಳಗೆ ಜಿಗಿಯುವುದು, ಇದೇ ರೀತಿಯ ಅಪಾಯಕಾರಿ ವರ್ತನೆಗಳ ಕಾರಣದಿಂದ ಅಪಘಾತಗಳಿಗೆ ಒಳಗಾಗುತ್ತಾರೆ. ವಯಸ್ಕರಿಗೂ ಇದು ಅನ್ವಯವಾಗುತ್ತದೆ ಆದ್ದರಿಂದ ಪ್ರಮುಖ ಕೆಲಸ ಕಾರ್ಯಗಳನ್ನು ಹಾಗೂ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿರುವುದು ಉಚಿತ.  ಉದಾಹರಣೆಗೆ, ಹಸಿದಾಗ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದಿರುವುದು ಒಳ್ಳೆಯದು. ಹಸಿದಿರುವ ನ್ಯಾಯಾಧೀಶರು, ಅಪರಾಧಿಗಳಿಗೆ ತೀವ್ರತರ ಶಿಕ್ಷೆ ನೀಡಿರುವ ಉದಾಹರಣೆಗಳುಂಟಂತೆ. ಹಸಿದಿರುವ ಅವಧಿಯಲ್ಲಿ ಹಸಿವನ್ನು ತಣಿಸುವ ಕರ್ತವ್ಯ ಮಾಡದೇ ವ್ಯವಹಾರಗಳನ್ನು ಮಾಡುವುದು ಉಚಿತವಲ್ಲ. ಉದಾ: ಖರೀದಿ ವ್ಯವಹಾರ, ಹೂಡಿಕೆ ನಿರ್ಧಾರಗಳು, ಷೇರು ಮಾರುಕಟ್ಟೆ ವ್ಯವಹಾರಗಳು ಇತ್ಯಾದಿ.  ಹಾಗೆ ಮಾಡಿದಲ್ಲಿ ನಷ್ಟ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚು.

ಹಸಿವು ತನ್ನ ಇರುವಿಕೆಯನ್ನು ಪ್ರಕಟಿಸಿದ ಕ್ಷಣದಿಂದ, ದೇಹದ ಇತರ ಅಗತ್ಯಗಳ ಆದ್ಯತೆಗಳು ಕಡಿಮೆಯಾಗಲು ಪ್ರಾರಂಭಗೊಳ್ಳುತ್ತವೆ. ಹಸಿವಿನ ಬೇಗೆ ಹೆಚ್ಚಾದಂತೆ, ಮೆದುಳಿಗೆ ನಿರಂತರವಾದ ಸಂದೇಶಗಳು ರವಾನೆಗೊಳ್ಳುತ್ತಲೇ ಇರುತ್ತವೆ. ಈ ಸಂದೇಶಗಳ ಸಾರಾಂಶ, ಇತರ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು ಹಾಗೂ ನಿಗದಿತ ಮಾರ್ಗದ ಮೂಲಕ ಅಂದರೆ ಬಾಯಿ, ಅನ್ನ ನಾಳಗಳ ಮೂಲಕ ಆಹಾರ ಜಠರವನ್ನು ತಲುಪಿಸುವ ಕೆಲಸಕ್ಕೆ ಅತ್ಯಂತ ಜರೂರಾಗಿ ಮಾಡುವುದು, ಎಂಬುವುದು. ಆಹಾರ ಜಠರವನ್ನು ಸೇರುವುದು ನಿಧಾನವಾದಂತೆ, ಬೇರೆ ಅಂಗಾಂಗಗಳು ಹಾಗೂ ಮಾನಸಿಕ ಸಮತೋಲನಗಳು ತಪ್ಪುವಷ್ಟು ತೀಕ್ಷ್ಣವಾದ ಸಂದೇಶಗಳು ಮೆದುಳಿಗೆ ತಲುಪುತ್ತವೆ. ಪೂರ್ವಸ್ಥಿತಿಗೆ ಮರಳಲಾಗದಂತಹ ಬದಲಾವಣೆಗಳು ದೇಹದ ವ್ಯವಸ್ಥೆಯಲ್ಲಿ ಉಂಟಾಗುವ ಹಂತದಲ್ಲಿ ಸಂಕಟವಾಗುವಂತಹ ಸಂದೇಶಗಳು ಮೆದುಳಿನಿಂದ ರವಾನೆಯಾಗುತ್ತವೆ.

ಹಸಿವಿನ ಆ ಬೇಗೆ ಅನುಭವಿಸುವ ಹೊತ್ತಿನಲ್ಲಿ ಜಿಹ್ವೆಯ ಪ್ರಾಮುಖ್ಯತೆ ಕಡಿಮೆಗೊಂಡು, ಜಿಹ್ವೆಯ ಜವಾಬ್ದಾರಿ ಬಹುಷಃ ಗುಣಮಟ್ಟವನ್ನು ಪರೀಕ್ಷಿಸುವುದಷ್ಟೇ ಆಗುತ್ತದೆ. ಇತರ ರಾಗದ್ವೇಶಗಳ ಅಸ್ಥಿತ್ವಕ್ಕೆ ಸಂಚಕಾರ ಬರುತ್ತದೆ. ಸಂಕೋಚ, ದುಃಖ,  ಕೋಪ, ಈರ್ಷ್ಯೆ, ಬಿಂಕ, ದ್ವೇಶ, ವೈರ, ಇತ್ಯಾದಿಗಳೇ ಮಾಯವಾಗುತ್ತಿರುವ ಸಂದರ್ಭದಲ್ಲಿ, ನಿದ್ರೆ, ಉತ್ಸಾಹ, ಸೃಜನಶೀಲತೆ, ದಯೆ, ದಾಕ್ಷಿಣ್ಯ, ಲೈಂಗಿಕಾಸಕ್ತಿ, ಮಾನ ಮರ್ಯಾದೆ ಇವುಗಳು ಕಂಬಿಕಿತ್ತಿರುತ್ತವೆ. ಹಾಗೆಯೇ, ನೋವು, ಉರಿ ಇತ್ಯಾದಿ ಎಷ್ಟೋ ಬಗೆಯ ದೇಹ ಬಾಧೆಗಳೂ ನೇಪಥ್ಯಕ್ಕೆ ಸೇರುತ್ತವೆ. ದೇಹವು ಸಾಮಾನ್ಯವಾಗಿ ಹೊಂದಿರುವ ಉತ್ಪಾದನಾ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ.

ಯಾರಿಗಾದರೂ ಆರೋಗ್ಯ ಸಂಬಂಧಿತ ತುರ್ತು ಪರಿಸ್ಥಿತಿ ಉಂಟಾದಲ್ಲಿ, ಚಿಕಿತ್ಸೆ ನೀಡಲಾಗುವ ಆಸ್ಪತ್ರೆ ತಲುಪುವ ಆತಂಕವಿದ್ದಾಗ, ವಾಹನದ ಬಗ್ಗೆಯಾಗಲೀ, ರಸ್ತೆಗಳ ಬಗ್ಗೆಯಾಗಲೀ, ಸಂಚಾರಿ ನಿಯಮಗಳ ಪಾಲನೆ ಮಾಡುವ ಬಗ್ಗೆಯಾಗಲೀ ಯಾವುದೇ ರೀತಿಯ ನಿಯಮ ಪಾಲಿಸುವ ಅಗತ್ಯ ಕಾಣುವುದಿಲ್ಲ. ಸಮಯ ಮೀರುವ ಮುನ್ನ ಆಸ್ಪತ್ರೆ ತಲುಪುವುದೇ ಏಕೈಕ ಗುರಿಯಾಗಿರುತ್ತದೆ.   ತುರ್ತು ಸಂದರ್ಭಗಳಲ್ಲಿ ನಗರ ವ್ಯವಸ್ಥೆಯ ಸಂಚಾರಿ ನಿಯಮಗಳಿಗೆ ತಿಲಾಂಜಲಿ ಕೊಟ್ಟಂತೆ, ತೀವ್ರ ಮಟ್ಟದ ಹಸಿವಾದಾಗ ಲಭ್ಯವಾಗುವ ಯಾವುದೇ ಆಹಾರಕ್ಕೆ ಪ್ರಥಮ ಆದ್ಯತೆ ಲಭಿಸಿ ಮಿಕ್ಕ ಎಲ್ಲಾ ರಾಗದ್ವೇಶಗಳು ಹಿಮ್ಮೆಟ್ಟುತ್ತವೆ.

ಎಲ್ಲರೂ ಪ್ರತಿದಿನವೂ  ಅನುಭವಿಸುವ ಅತೀ ಸಾಮಾನ್ಯವಾದ ಹಸಿವಿನ ಬಗ್ಗೆ ಇಷ್ಟೊಂದು ಚಿಂತನೆ ಈಗ ಯಾಕೆ?

ಹಣಕ್ಕಿಂತ ಆರೋಗ್ಯ ಮುಖ್ಯ. ಹೀಗಾಗಿ, ಹಸಿವನ್ನು ತಣಿಸುವುದು ಮುಖ್ಯ. ರುಚಿಯೇ ಪ್ರಧಾನ ಎಂದು ನಂಬುವವರು, ಮನೆಯಲ್ಲಿ ಗೃಹಿಣಿ ತಯಾರಿಸುವ ತಿಂಡಿ ತಿನಿಸುಗಳಿಗೆ ಹೆಚ್ಚಿನ ಗೌರವ ನೀಡಿ ಸೇವಿಸುವುದು,  ವಿನಾ ಕಾರಣ ತಪ್ಪುಗಳನ್ನು ಹುಡುಕದೆ, ಪಾಲಿಗೆ ಬಂದಿದ್ದು ಪಂಚಾಮೃತ ಎಂದು ನಂಬಿ ಸಂತೋಷದಿಂದ ತಿನ್ನುವ ತಿನಿಸನ್ನು ಸವಿಯುವುದು, ದೇಶದ ಯಾವುದೋ ಕಂಡರಿಯದ ಹಳ್ಳಿಗಳಲ್ಲಿ ಕಷ್ಟಪಟ್ಟು ಬೆಳೆಸಿದವರಿಂದ ಪ್ರಾರಂಭಗೊಂಡು ಹಲವಾರು ಸೇವಾದಾತರು(ಕೂಲಿ, ವಾಹನ ಚಾಲಕರು ಇತ್ಯಾದಿ) ಹಾಗೂ ಪೂರೈಕೆದಾತರು(ಸಂಸ್ಕರಿಸುವವರು, ವರ್ತಕರು ಇತ್ಯಾದಿ) ಇವರುಗಳ ಕೃಪೆಯಿಂದ ನಮ್ಮ ಮನೆಗೆ ತಲುಪಿರುವ ಆಹಾರಕ್ಕೆ ನೀಡಬೇಕಾದ ಗೌರವವನ್ನು ನೆನಪಿಟ್ಟುಕೊಂಡು, ದುಂದು ಮಾಡದೆ, ಆಹಾರಧಾನ್ಯಗಳನ್ನು ಹಾಳು ಮಾಡದಿರುವುದು ಇಂದಿನ ಅಗತ್ಯ.

ಯಾವುದೇ ವೈರಾಣುವಿನ ವಿರುದ್ಧ ದೈಹಿಕ ಸಾಮರ್ಥ್ಯವನ್ನು ಬೆಳೆಯುವುದು ಉತ್ತಮ ಗುಣ ಮಟ್ಟದ ನಿದ್ರೆಯಿಂದ ಮಾತ್ರ ಸಾಧ್ಯ. ಕೇವಲ ಉತ್ತಮ ಪೌಷ್ಟಿಕಾಂಶವಿರುವ ಆಹಾರದಿಂದ ದೈಹಿಕ ಇಮ್ಯುನಿಟಿಯನ್ನು ಬೆಳೆಸಲು ಸಾಧ್ಯವಾಗದು. ಆದರೆ ಉತ್ತಮ ಗುಣಮಟ್ಟದ ನಿದ್ರೆಗೆ ಅತ್ಯಗತ್ಯವಾದದ್ದು ಹಸಿವನ್ನು ಉತ್ತಮ ಆಹಾರದಿಂದ ತಣಿಸುವುದು. ಆದ್ದರಿಂದ ಉತ್ತಮ ನಿದ್ರೆಗೆ ಸಹಕಾರಿಯಾಗುವಷ್ಟರ ಮಟ್ಟಿಗೆ ಮಾತ್ರ ಹಸಿವನ್ನು ತಣಿಸಬೇಕು ಎಂಬುದನ್ನು ನೆನಪಿಡಲೇಬೇಕು.  

ಅಸಮಾನತೆಯೇ ತುಂಬಿರುವ  ಪ್ರಪಂಚದಲ್ಲಿ ಎಲ್ಲರೂ   ಅದೃಷ್ಟವಂತರಾಗಿರುವುದಿಲ್ಲ. ನಮ್ಮ ಈಗಿನ ಉತ್ತಮ ಪರಿಸ್ಥಿತಿಗೆ ಹರಿಚಿತ್ತವೇ ಮೂಲ ಎಂಬುದನ್ನು ಮರೆಯದೇ ಹಣವೂ ಸಹ ಆಹಾರವನ್ನು ಖರೀದಿಸಲಾಗದ ಈ ಸಂದರ್ಭದಲ್ಲಿ ತಮ್ಮ ಹಾಗೂ ತಮ್ಮ ಕುಟುಂಬಗಳ ಹಸಿವುಗಳನ್ನು ತಣಿಸಲಾಗದ ಪರಿಸ್ಥಿತಿಗಳಲ್ಲಿ ವಿಶ್ವಾದ್ಯಂತ 960 ಮಿಲಿಯ ಜನರಿದ್ದಾರೆ ಎಂಬುದನ್ನು ಲಕ್ಷ್ಯದಲ್ಲಿಟ್ಟುಕೊಂಡು, ನಿಮ್ಮ ಅನುಕೂಲ ನೋಡಿಕೊಂಡು, ನಿಮಗೆ ತೋರಿದಂತೆ, ಪರಿಸ್ಥಿತಿಗೆ ತಕ್ಕಂತೆ ಪ್ರತಿ ದಿನ ಹಸಿದು ಮಲಗುತ್ತಿರುವ ಜನರ ಹಸಿವು ತಣಿಸುವತ್ತ ನೆರವು ನೀಡಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ.

ಹಸಿವನ್ನು ತಣಿಸುವುದರಿಂದ ವ್ಯಕ್ತಿಗಳ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಹಸಿವನ್ನು ತಣಿಸಿಕೊಂಡಿರುವ ವ್ಯಕ್ತಿಯು ದೇಶದ ಉತ್ಪಾದಕತೆಗೆ ತನ್ನ ಪಾಲನ್ನು ಕೊಟ್ಟಿರುತ್ತಾನೆ. ಹಸಿವನ್ನು ತಣಿಸುವಲ್ಲಿ ನಮ್ಮ ಪಾತ್ರವಿದ್ದಲ್ಲಿ, ದೇಶದ ಉತ್ಪಾದಕತೆ ಹೆಚ್ಚುವಲ್ಲಿ ನಮ್ಮ ಪಾಲೂ ಇರುತ್ತದೆ.

ಹಸಿವು ಅಮೂಲ್ಯ. ಹಸಿವಿಗೆ ಗೌರವ ನೀಡಿ.

ಷಷಷಷಷಷಷಷಷ


Posted

in

by

Tags:

Comments

Leave a Reply

Your email address will not be published. Required fields are marked *