ಬಂಗಾರದ ಬೆಲೆ ಏರಿಕೆ ಸುತ್ತ ಮುತ್ತ – ಭಾಗ 2
ಬಂಗಾರ ಒಂದು ಮಾರಾಟ ವಸ್ತುವೂ ಹೌದು ಮತ್ತು ಹೂಡಿಕೆ ಆಸ್ತಿಯೂ ಹೌದು. ಇದನ್ನು ನಾಶಪಡಿಸಲಾಗುವುದಿಲ್ಲ. ಬಹುತೇಕವಾಗಿ ಬಂಗಾರವನ್ನು ಯಾವಾಗ ಬೇಕಾದರೂ ಮರಳಿ ಪಡೆಯಬಹುದು. ಹೀಗಾಗಿ ಆರ್ಥಿಕವಾಗಿ ಬಂಗಾರದ ಒಡೆತನ ಬದಲಾಗುತ್ತಿದೆಯೇ ಹೊರತು ಬಂಗಾರವನ್ನು ಮರಳಿ ಬಾರದಂತೆ ಬಳಕೆ ಮಾಡುವುದು ಬಹು ವಿರಳ.
ಬAಗಾರದ ಒಂದು ಅತ್ಯದ್ಭುತ ಲಕ್ಷಣವೆಂದರೆ ಯಾವುದೇ ಸನ್ನಿವೇಶದಲ್ಲಿಯೂ ಅದರ ನೈಜಬೆಲೆಯನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಬಂಗಾರಕ್ಕಿರುತ್ತದೆ. ಹೀಗಾಗಿ ಅದು ಹಣದುಬ್ಬರಕ್ಕಿಂತ ಹೆಚ್ಚಿನ ಆದಾಯಗಳಿಸುತ್ತದೆ. ಮಾರುಕಟ್ಟೆಯಲ್ಲಿ ಹಣದುಬ್ಬರಕ್ಕೆ ಪ್ರತಿಯಾಗಿ ನಿಲ್ಲಬಹುದಾದ ಆಸ್ತಿಗಳೆಂದರೆ ಬಂಗಾರ, ವಸ್ತುಗಳು ಸ್ಥಿರಾಸ್ತಿಗಳು ಮತ್ತು ಹಣದುಬ್ಬರ ಆಧಾರಿತ ಹೂಡಿಕೆ ಪತ್ರಗಳು ಆದರೆ ಬಂಗಾರದ ವಿಶೇಷ ಗುಣಗಳಿಂದ ಶತಮಾನಗಳ ಕಾಲದಿಂದಲೂ ಬಂಗಾರವನ್ನು ಹಣದುಬ್ಬರಕ್ಕೆ ಮದ್ದಾಗಿ ಬಳಸಲಾಗುತ್ತಿದೆ.
ಬಹಳಷ್ಟು ಅಧ್ಯಯನಗಳ ಪ್ರಕಾರ ಬಂಗಾರ ದೀರ್ಘಾವಧಿಯಲ್ಲಿ ಹಣದುಬ್ಬರಕ್ಕೆ ಪ್ರತಿಯಾಗಿ ಏರಿಕೆಗೊಳ್ಳುವ ಕಾರಣದಿಂದ ಅದೊಂದು ಉತ್ತಮ ಹೂಡಿಕೆಯಾಗಿರುತ್ತದೆ. ಹಣದುಬ್ಬರ ಏರಿಕೆಗೊಂಡಿರುವ ವರ್ಷಗಳಲ್ಲಿ ಬಂಗಾರದ ಬೆಲೆಯೂ ಏರಿಕೆಗೊಂಡಿರುವುದು ಒಂದು ಅಧ್ಯಯನದಿಂದ ತಿಳಿದು ಬಂದಿರುತ್ತದೆ. ಇನ್ನೊಂದು ಅಧ್ಯಯನದ ಪ್ರಕಾರ ೧೯೬೮ರಿಂದ ೧೯೮೦ರ ಅವಧಿಯಲ್ಲಿ ಶೇ ೧ರಷ್ಟು ಹಣದುಬ್ಬರ ಉಂಟಾಗುವ ನಿರೀಕ್ಷೆಯಲ್ಲಿ ಬಂಗಾರದ ಬೆಲೆಗಳು ಶೇ ೫ರಷ್ಟು ಹೆಚ್ಚಾಗಿದ್ದವು. ಕೆಲವು ಅವಧಿಗಳಲ್ಲಿ ಬೆಲೆಗಳು ಸ್ಥಗಿತಗೊಂಡಿರುವುದು ಅಥವಾ ಸಕ್ರಿಯವಾಗಿ ಗಣನೀಯವಾಗಿ ಇಳಿಕೆಯಾಗಿರುವುದು ಕಂಡುಬAದಿರುತ್ತದೆ. ಹೀಗಾಗಿ ದೀರ್ಘಾವಧಿಯಲ್ಲಿ ಸರಾಸರಿ ಲೆಕ್ಕದಲ್ಲಿ ಬಂಗಾರದ ಬೆಲೆಗಳ ಏರಿಕೆ ಆಕರ್ಷಣೀಯವಾಗದಿರಬಹುದು.
ಆದರೆ ಬಂಗಾರದ ಬೆಲೆಗಳು ಸ್ಥಗಿತಗೊಂಡ ಅವಧಿ ಅಥವಾ ಗಣನೀಯವಾಗಿ ಇಳಿಕೆಯಾಗಿರುವ ಪರಿಸ್ಥಿತಿಗಳನ್ನು ಸ್ಥೂಲವಾಗಿ ವಿಶ್ಲೇಷಿಸಿದರೆ ಕೆಲವು ಸ್ವಾರಸ್ಯಕರ ವಿಷಯಗಳು ಕಂಡುಬರುತ್ತವೆ. ಕಳೆದ ನೂರು ವರ್ಷಗಳಲ್ಲಿ ಬಹುಭಾಗದಷ್ಟು ಕಾಲ ಬಂಗಾರದ ಮಾರಾಟಗಳನ್ನು ಸರಕಾರಗಳು ನಿಯಂತ್ರಣ ಮಾಡುತ್ತಿದ್ದವು. ಹಾಗೂ ಬಂಗಾರವು ಹಣದ ಚಲಾವಣೆಗೆ ಆಧಾರವಾಗಿದ್ದರ ಹಿನ್ನಲೆಯಲ್ಲಿ ಮತ್ತು ಕಾರಣದಿಂದ ವಿವಿಧ ದೇಶಗಳ ಸರಕಾರಗಳ ಕ್ರಮಗಳು ಇಂದಿನ ಪರಿಸ್ಥಿತಿಗೆ ಅಪ್ತಸ್ತುತವಾಗಿದ್ದವು.
ಬಂಗಾರದ ಮಾರುಕಟ್ಟೆಯಲ್ಲಿ ಸರಕಾರಗಳು ಹಾಗೂ ಕೇಂದ್ರ ಬ್ಯಾಂಕುಗಳು ಅಂದಿನ ಪರಿಸ್ಥಿತಿಯ ಒತ್ತಡಗಳಿಂದ ಕೈಗೊಳ್ಳುತ್ತಿದ್ದ ಮಾರಾಟ ವ್ಯವಹಾರಗಳು ಬಂಗಾರದ ಬೆಲೆ ಏರಿಕೆಗೆ ಕಡಿವಾಣಗಳನ್ನು ಹಾಕಿದ್ದವು.
ಬಂಗಾರ ಮಾನವ ಜೀವನದಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ ಎಂಬುದು ಸಾಬೀತಾಗಿರುವ ವಿಷಯ. ಬಂಗಾರದಲ್ಲಿ ಹೂಡಿಕೆ ಮಾಡುವಲ್ಲಿ ವ್ಯಕ್ತಿಗಳು ಮತ್ತು ಖಾಸಗಿ ಸಂಸ್ಥೆಗಳು ಮಾತ್ರವಲ್ಲದೆ ಪ್ರತಿಷ್ಠಿತ ದೇಶಗಳು ಹಾಗೂ ಕೇಂದ್ರ ಬ್ಯಾಂಕುಗಳೂ ಸಹ ಪ್ರಮುಖ ಪಾತ್ರ ವಹಿಸುತ್ತಿವೆ.
ಕಳೆದ ನೂರು ವರ್ಷಗಳ ಇತಿಹಾಸದಲ್ಲಿ ಬಂಗಾರದ ಬೆಲೆ ಏರಿಕೆಯನ್ನು ವಿಶ್ಲೇಷಿಸಿದಾಗ ನಮಗೆ ಒಂದು ನೀರಸ ಹಾಗೂ ನಿರಾಶಾದಾಯಕ ಚಿತ್ರ ಕಂಡುಬರುತ್ತದೆ. ಒಂದು ಅಧ್ಯಯನದ ಪ್ರಕಾರ ಕಳೆದ ನೂರು ವರ್ಷಗಳಲ್ಲಿ ತಲಾ ವಾರ್ಷಿಕವಾಗಿ ಬಂಗಾರದ ಬೆಲೆಗಳ ನಿವ್ವಳ ಏರಿಕೆ ಕೇವಲ ಶೇ. ೦.೩ರಷ್ಟು ಮಾತ್ರ ಕಂಡುಬರುತ್ತದೆ. ದೀರ್ಘಾವಧಿಗಳಲ್ಲಿ ಬಂಗಾರದಿAದ ಗಳಿಸುವ ಆದಾಯ ಆಕರ್ಷಕವಾಗಿರಲಿಲ್ಲ. ಉದಾ ೧೯೭೦ರ ದಶಕದಿಂದ ಇಂದಿನವರೆಗೆ ಸರಾಸರಿ ವಾರ್ಷಿಕ ಶೇ ೧೦ ಲಾಭವಾಗಿರುತ್ತದೆ. ಆದರೆ ಇಡೀ ಶತಮಾನವನ್ನೇ ತೆಗೆದುಕೊಂಡರೆ ೧೯೦೧ರಲ್ಲಿ ಡಾಲರ್ ೧೯ ಇದ್ದ ಬಂಗಾರದ ಬೆಲೆ ೨೦೦೦ರಲ್ಲಿ ಡಾಲರ್ ೨೪೦ ತಲುಪಿತ್ತು. ೧೦೦ ವರ್ಷಗಳ ಅವಧಿಯಲ್ಲಿ ಬಂಗಾರದಿAದ ಲಭ್ಯವಾದ ಲಾಭ ಸರಾಸರಿ ವಾರ್ಷಿಕ ಶೇ. ೨.೬. ಆದರೆ ಇತಿಹಾಸದಲ್ಲಿನ ಈ ಬೆಲೆಗಳು ವರ್ತಮಾನ ಕಾಲಕ್ಕೆ ಪ್ರಸ್ತುತವಾಗದಿರಬಹುದಾಗಿರುತ್ತದೆ, ಏಕೆಂದರೆ ಬಹಳಷ್ಟು ಅವಧಿಯಲ್ಲಿ ಬಂಗಾರದ ಬೆಲೆಯನ್ನು ಸರಕಾರಗಳು ನಿಯಂತ್ರಿಸುತ್ತಿದ್ದವು. ಹಾಗೆಯೇ ಕಳೆದ ೩೦-೫೦ ವರ್ಷಗಳ ಇತಿಹಾಸವನ್ನು ಅವಲೋಕಿಸಿದಾಗಲೂ ತಲಾವಾರ್ಷಿಕ ಹೆಚ್ಚಳ ಶೇ ೮-೯ರಷ್ಟು ಸೀಮಿತಗೊಂಡಿರುತ್ತವೆ. ಆದರೆ 2010ರಿಂದ 2020ರ ಅವಧಿಯಲ್ಲಿ ಭಾರತದಲ್ಲಿ ಬಂಗಾರದ ಬೆಲೆ ಹತ್ತು ಗ್ರಾಂಗಳಿಗೆ ರೂ. ೧೮೫೦೦ ರಿಂದ ರೂ. ೪೮೦೦೦/- ತಲುಪಿದ ನಂತರ ಕಳೆದ ಎರಡು ವರ್ಷಗಳಲ್ಲಿ ಬಂಗಾರದ ಬೆಲೆಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲದಿರುವುದು ಕಂಡು ಬಂದಿರುತ್ತದೆ.
ಬಂಗಾರ ಬೆಲೆ ಏರಿಕೆಗಳನ್ನು ಸ್ಥೂಲವಾಗಿ ಪರಿಶೀಲಿಸಿದರೆ, ಒಂದು ಅವಧಿಯಲ್ಲಿ ಬಂಗಾರದ ಬೆಲೆಗಳಲ್ಲಿ ಅಪಾರ ಏರಿಕೆ ಕಂಡು ಬಂದು ನಂತರ ಇನ್ನೊಂದು ಅವಧಿಯಲ್ಲಿ ಬೆಲೆಗಳು ದೀರ್ಘಕಾಲದವರೆಗೆ ಸ್ಥಗಿತಗೊಂಡಿರುತ್ತವೆ. ಈ ಹಿಂದೆ ಬಂಗಾರದ ಬೆಲೆಗಳು ಹೆಚ್ಚು ಏರಿಕೆಯಾದಾಗಲೆಲ್ಲ ಅಭಿವೃದ್ಧಿಗೊಂಡ ರಾಷ್ಟçಗಳು ಬಂಗಾರವನ್ನು ಮಾರಾಟ ಮಾಡುತ್ತಿದ್ದವು.
ಬಂಗಾರದ ಮಹತ್ವ ಅಭಿವೃದ್ಧಿಗೊಂಡ ರಾಷ್ಟçಗಳಿಗೂ ತಿಳಿದಿಲ್ಲದಿದ್ದರಿಂದ ಬಂಗಾರದಲ್ಲಿ ಹೂಡಿಕೆ ಮಾಡುವ ಬಗ್ಗೆ ಕೇಂದ್ರ ಬ್ಯಾಂಕುಗಳು ಹೆಚ್ಚು ಆಸಕ್ತಿ ವಹಿಸಿರಲಿಲ್ಲ. ಹಾಗೆ ನೋಡಿದರೆ ಸರಕಾರಿ ಸಾಲ ಪತ್ರಗಳಲ್ಲಿ ಷೇರು ಪತ್ರಗಳಲ್ಲಿ ಹೂಡಿಕೆ ಮಾಡುವುದರ ಮುಂದೆ ಬಂಗಾರದಲ್ಲಿ ಮಾಡುತ್ತಿದ್ದ ಹೂಡಿಕೆ ಸ್ವಲ್ಪಮಟ್ಟಿಗೆ ಸಪ್ಪೆ ಎಂದು ಕಾಣಿಸುತ್ತಿತ್ತು.
ಹಾಗಿದ್ದರೂ ಪ್ರಪಂಚದಲ್ಲಿ ಆಗಾಗ್ಗೆ ಸಂಭವಿಸುತ್ತಿದ್ದ ಆರ್ಥಿಕ ಬಿಕ್ಕಟ್ಟುಗಳ ಅವಧಿಯಲ್ಲಿ ಬಂಗಾರದ ಮಹತ್ವ ಎದ್ದು ಕಾಣುತ್ತಿತ್ತು. ರಾಷ್ಟçಗಳು ತಾತ್ಕಾಲಿಕ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದಾಗ ರಾಷ್ಟçಗಳ ಮಟ್ಟದಲ್ಲಿಯೂ ಬಂಗಾರವೇ ಆಪತ್ಕಾಲದ ಹೂಡಿಕೆ ಎಂಬುದು ಮನದಟ್ಟಾಯಿತು.
ಹಾಗೆಯೇ ವರ್ತಮಾನ ಅವಧಿಯಲ್ಲಿ ಬಹಳಷ್ಟು ರಾಷ್ಟçಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದು ವ್ಯಕ್ತಿಗಳೂ ಹಾಗೂ ರಾಷ್ಟçಗಳೂ ಶ್ರೀಮಂತರಾಗತೊಡಗುತ್ತಿವೆ. ವ್ಯಕ್ತಿಗಳ ಮಟ್ಟದಲ್ಲಿ ಹೂಡಿಕೆಯಲ್ಲಿ ಬಂಗಾರ ಒಂದು ಭಾಗವಾಗಿರಲೇಬೇಕು ಎಂದು ನಂಬಿಕೆ ಮೂಡಿದ್ದರೆ, ರಾಷ್ಟçಗಳಿಗೆ ತಮ್ಮ ವಿದೇಶಿ ವಿನಿಮಯ ದಾಸ್ತಾನಿನಲ್ಲಿ ಒಂದು ಪ್ರಮುಖ ಭಾಗ ಬಂಗಾರವಿರಬೇಕು ಎಂದು ನಂಬಿಕೆ ಉಂಟಾಗಿ ಈ ಬಗ್ಗೆ ಒಂದು ನೀತಿಯನ್ನು ರೂಪಿಸಿಕೊಂಡಿವೆ. ಆದ್ದರಿಂದ ಬಹಳಷ್ಟು ರಾಷ್ಟ್ರಗಳ ಕೇಂದ್ರ ಬ್ಯಾಂಕ್ ಗಳು ಬಂಗಾರದ ಮಾರುಕಟ್ಟೆಯಲ್ಲಿ ಸಕ್ರಿಯವಾಗಿವೆ. ವಿಶ್ವದ 162 ದೇಶಗಳ ಪೈಕಿ 23 ದೇಶಗಳು 2021ರಲ್ಲಿ 463.20 ಟನ್ ಗಳಷ್ಟು ಬಂಗಾರವನ್ನು ಮಾರುಕಟ್ಟೆಯಿಂದ ಖರೀದಿಸಿವೆ. ಇವುಗಳಲ್ಲಿ ಪ್ರಮುಖವಾಗಿ ಬಂಗಾರವನ್ನು ಖರೀದಿಸಿದ ದೇಶಗಳೆಂದರೆ ಚೀನಾ, ಭಾರತ, ಜಪಾನ್, ಧಾಯ್ ಲ್ಯಾಂಡ್, ಹಂಗೇರಿ ಹಾಗೂ ಬ್ರೆಜಿಲ್.
ಭಾರತೀಯ ರಿಸರ್ವ್ ಬ್ಯಾಂಕ್ 2017ರಲ್ಲಿ 0.3 ಟನ್, 2018ರಲ್ಲಿ 42.30 ಟನ್, 2019 ರಲ್ಲಿ 34.50 ಟನ್ 2020ರಲ್ಲಿ 41.7 ಟನ್ ಹಾಗೂ 2021ರಲ್ಲಿ 73.8 ಟನ್ ಬಂಗಾರವನ್ನು ಖರೀದಿಸಿದೆ, ಅಮೆರಿಕಾದ ಆರ್ಥಿಕ ಬಿಕ್ಕಟ್ಟು ಮತ್ತು ಐರೋಪ್ಯ ದೇಶಗಳಲ್ಲಿನ ಆರ್ಥಿಕ ಬಿಕ್ಕಟ್ಟುಗಳ ಕಾರಣದಿಂದ ಡಾಲರ್, ಯೂರೋ, ಪೌಂಡು ಮತ್ತು ಈ ಅಭಿವೃದ್ಧಿಗೊಂಡ ರಾಷ್ಟçಗಳ ಸರಕಾರಿ ಸಾಲಪತ್ರಗಳೂ ಸಹ ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಬಂಗಾರದಲ್ಲಿ ಹೆಚ್ಚು ಹೂಡಿಕೆ ಮಾಡುವಲ್ಲಿ ಇನ್ನೂ ಹೆಚ್ಚಿನ ಮಹತ್ವ ಉಂಟಾಗತೊಡಗಿದೆ.
ರವೀಂದ್ರನಾಥ
1ನೇ ಫೆಬ್ರವರಿ 2022
Leave a Reply