ನಾನು ಇತ್ತೀಚೆಗೆ ಓದಿದ ಪುಸ್ತಕ
ಚೋರಶಾಸ್ತ್ರಂ
ಮಲಯಾಳಂ ಮೂಲ: ವಿ, ಜೆ. ಜೇಮ್ಸ್
ಇಂಗ್ಲಿಷ್ ಅನುವಾದ : ಮೋರ್ಲಿ ಜೆ ನಾಯರ್
ಮೊದಲ ಪ್ರಕಟಣೆ: ೨೦೦೨
ಎರಡನೆ ಮುದ್ರಣ: ೨೦೨೦
ಪ್ರಕಾಶಕರು: ಏಕ -ವೆಸ್ಟ್ ಲ್ಯಾಂಡ್ ಪಬ್ಲಿಕೇಶನ್ಸ್, ಚೆನ್ನೈ
ಪುಟ: ೧೬೬ ಬೆಲೆ:ರೂ. ೨೯೯/-
ಕಥೆಯ ಸಾರಾಂಶ:
ತೆಂಗಿನಕಾಯಿ ಕಳ್ಳತನ ಮಾಡುತ್ತಿದ್ದವನ ಮಗ ಬಹುತೇಕ ಬಡವರ ಮನೆಗಳಲ್ಲಿ ಕಳ್ಳತನ ಮಾಡುತ್ತಿರುವ ಒಬ್ಬ ಚಿಲ್ಲರೆ ಕಳ್ಳ. ಅವನ ಹೆಸರೇ ಕಳ್ಳ. ಅದೇ ಊರಿನಲ್ಲಿ ಒಬ್ಬ ವಿಲಕ್ಷಣ ಪ್ರೊಫೆಸರ್. ಅವನು ಹಲವಾರು ಪುರಾತನ ಗ್ರಂಥಗಳನ್ನು ಅಧ್ಯಯನ ಮಾಡುತ್ತಿರುತ್ತಾನೆ. ಅವನಿಗೆ ಅಕಸ್ಮಾತ್ ಆಗಿ ದೊರೆತ ಚೋರಶಾಸ್ತ್ರಂ ಗ್ರಂಥವನ್ನೂ ಸೈದ್ಧಾಂತಿಕವಾಗಿ ಆಳವಾಗಿ ಅಧ್ಯಯನ ಮಾಡಿರುತ್ತಾನೆ. ಅರವತ್ತು ನಾಲ್ಕು ವಿದ್ಯೆಗಳಲ್ಲಿ ಒಂದಾದ ಚೋರಶಾಸ್ತ್ರದಲ್ಲಿ ಕಳ್ಳರಿಗೆ ಬೇಕಾಗುವ ಕೈಚಳಕ ಹಾಗೂ ಕಿವಿಮಾತುಗಳ ಬಗ್ಗೆ ಬಹಳಷ್ಟು ತಿಳಿದುಕೊಂಡಿರುತ್ತಾನೆ.
ಒಂದು ದಿನ ಚಿಲ್ಲರೆ ಕಳ್ಳ ವಿಲಕ್ಷಣ ಪ್ರೊಫೆಸರ್ ಮನೆಯಲ್ಲಿ ಕಳ್ಳತನ ಮಾಡಲು ಹೋಗಿ ಪ್ರೊಫೆಸರ್ ಕೈಲಿ ಸಿಕ್ಕಿ ಬೀಳುತ್ತಾನೆ. ಪ್ರೊಫೆಸರ್ ಕಳ್ಳನಿಗೆ ವಿಶೇಷ ಶಕ್ತಿಯನ್ನು ತಿಳಿಸಿಕೊಡುತ್ತಾನೆ. ಕೇವಲ ದೃಷ್ಟಿ ಮಾತ್ರದಿಂದಲೇ ಯಾವುದೇ ಬೀಗವನ್ನು ತೆರೆಸುವ ಸಾಮರ್ಥ್ಯ ಕಳ್ಳನಿಗೆ ಲಭಿಸುತ್ತದೆ. ಜೊತೆಗೆ ಈ ಸಾಮರ್ಥ್ಯವನ್ನು ಸಿದ್ದಿಸಿಕೊಳ್ಳಲು ಕೆಲವೊಂದು ಕಟ್ಟಳೆಗಳನ್ನು ಪಾಲಿಸಬೇಕಾಗುತ್ತದೆ. ಈ ವಿಶೇಷ ಸಾಮರ್ಥ್ಯದಿಂದ ಕಳ್ಳ ಶ್ರೀಮಂತನಾದರೂ ಕಟ್ಟಳೆಗಳನ್ನು ಪಾಲಿಸದಿರುವುದರಿಂದ ಕಳ್ಳ ಅವನತಿ ಹೊಂದುತ್ತಾನೆ.
ಪುಸ್ತಕದ ಬಗ್ಗೆ ಅನಿಸಿಕೆಗಳು:
- ವಿಶಿಷ್ಟ ಕಥಾ ಹಂದರವನ್ನು ಕುತೂಹಲಕಾರಿಯಾಗಿ ಹೆಣೆಯಲಾಗಿದೆ.
- ಕಥೆಯಲ್ಲಿ ಬರುವ ಹಲವಾರು ತಿರುವುಗಳನ್ನು ಸುಲಲಿತವಾಗಿ ನಿಭಾಯಿಸಲಾಗಿದೆ
- ಕಥೆಯ ಉದ್ದಕ್ಕೂ ಕಳ್ಳತನದ ವೃತ್ತಿಯಯ ಹಿನ್ನಲೆಯಲ್ಲಿ ತಿಳಿ ಹಾಸ್ಯವನ್ನು ಕಾಪಾಡಿಕೊಂಡು ಬರಲಾಗಿದೆ
- ಕಳ್ಳತನ ವೃತ್ತಿಯ ಬಗ್ಗೆ ವಾಸ್ತವ ಹಾಗೂ ಕಲ್ಪಿತ ಪ್ರಸಂಗಗಳ ವಿವರಗಳನ್ನು ಮನಮುಟ್ಟುವಂತೆ ವಿವರಿಸಲಾಗಿದೆ
- ಕೇರಳ ರಾಜ್ಯದ ಸಂಸ್ಕೃತಿಯ ಬಗ್ಗೆ ಕಾಳಜಿ ಇರುವ ಲೇಖಕರು ತಮ್ಮ ಸಂಸ್ಕೃತಿಯ ಕೆಲವು ವಿವರಗಳನ್ನು ಕಥೆಯ ಭಾಗವಾಗಿ ತಿಳಿಸಿದ್ದಾರೆ.
ಆದರೂ ಪುಸ್ತಕವನ್ನು ಅಂತ್ಯ ಮಾಡುವಲ್ಲಿ ಮೊದಲು ಕಂಡುಬರುವ ಬಿಗುವನ್ನು ಕಾಪಾಡಿಕೊಳ್ಳಲು ಲೇಖಕರಿಗೆ ಸಾಧ್ಯವಾಗಿಲ್ಲ.
ಲೇಖಕರು ವಿಕ್ರಂ ಸಾರಾಭಾಯ್ ಸೆಂಟರ್ ನಲ್ಲಿ ವಿಜ್ಞಾನಿಯಾಗಿದ್ದು ಸಾಹಿತ್ಯ ಕೃಷಿ ಮಾಡಿ ಹಲವಾರು ಗೌರವಗಳನ್ನು ಗಳಿಸಿದ್ದಾರೆ. ಅನುವಾದಕರು ಅಮೇರಿಕಾದಲ್ಲಿ ನೆಲೆಸಿದ್ದು ವೃತ್ತಿಯಲ್ಲಿ ವಕೀಲರಾಗಿದ್ದಾರೆ ಹಾಗೂ ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ.
ಷಷಷಷಷಷಷಷಷಷಷ
Leave a Reply